ಬೈಬಲ್
	ಕ್ರೈಸ್ತರ ಪವಿತ್ರ ಗ್ರಂಥ. ವಾಸ್ತವವಾಗಿ 72 ಗ್ರಂಥಗಳ ಸಂಪುಟ. ಕೆಥೋಲಿಕರಲ್ಲದ ಕ್ರೈಸ್ತ ಪಂಥಗಳು ಕೇವಲ 66 ಗ್ರಂಥಗಳಷ್ಟನ್ನೇ ಬೈಬಲಿನ ಪ್ರಮಾಣ ಗ್ರಂಥಗಳೆಂದು ಸ್ವೀಕರಿಸುತ್ತವೆ; ಉಳಿದ ಗ್ರಂಥಗಳನ್ನು ಅಪಾಕ್ರಿಫ ಎಂದು ಕರೆಯುತ್ತಾರೆ. ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಬೈಬಲಿನ ಎರಡು ಭಾಗಗಳು. ಇವು ಕ್ರಮವಾಗಿ ಕ್ರಿಸ್ತಪೂರ್ವ ಹಾಗೂ ಕ್ರಿಸ್ತನ ಮತ್ತು ತರುವಾಯದ ಅವಧಿಗೆ ಸಂಬಂಧಿಸುತ್ತವೆ.

ಮೂಲತಃ ಹಳೆಯ ಒಡಂಬಡಿಕೆಯ ಹೆಚ್ಚಿನ ಭಾಗವನ್ನು ಹೀಬ್ರು ಭಾಷೆಯಲ್ಲೂ ಉಳಿದ ಸ್ವಲ್ಪ ಭಾಗ ಮತ್ತು ಹೊಸ ಒಡಂಬಡಿಕೆಯನ್ನು ಗ್ರೀಕ್ ಭಾಷೆಯಲ್ಲೂ ಬರೆಯಲಾಯಿತು. ಬೈಬಲಿನ ವಿವಿಧ ಗ್ರಂಥಗಳ ಕರ್ತೃ ಮತ್ತು ಕಾಲಗಳ ಬಗೆಗೆ ಸ್ಪಷ್ಟ ತಿಳಿವಳಿಕೆ ಇಲ್ಲ. ಕೆಲವು ಕರ್ತೃಗಳ ಹೆಸರು ಮತ್ತು ಕಾಲ ಸಾಕಷ್ಟು ಸ್ಪಷ್ಟವೇ ಇವೆ. ಉದಾಹರಣೆಗೆ, ಹೊಸ ಒಡಂಬಡಿಕೆಯ ಪತ್ರಗಳ ಕರ್ತೃ ಪೌಲ್. ಆದರೆ ಹಲವು ಸಂದರ್ಭಗಳಲ್ಲಿ ಒಂದು ಗ್ರಂಥವನ್ನು ಬರೆದವ ಅದರ ಕರ್ತೃವೆಂದು ಭಾವಿಸಲಾಗಿದ್ದವನ ಶಿಷ್ಯನೋ ಶಿಷ್ಯ ಪರಂಪರೆಯವನೋ ಆಗಿರಬಹುದು. ಉದಾಹರಣೆಗೆ ಜಾನ್ ಬರೆದುದು ಎಂದು ಭಾವಿಸಲಾದ "ಪ್ರಕಟಣೆ" ಗ್ರಂಥ ಮೂಲಭೂತವಾಗಿ ಜಾನನ ಪರಂಪರೆಯದೇ ಆಗಿದ್ದರೂ ಇದರ ಕರ್ತೃವೂ ಜಾನನ "ಸುವಾರ್ತೆ"ಯ ಮತ್ತು ಪತ್ರಗಳ ಕರ್ತೃವೂ ಒಂದೇ ವ್ಯಕ್ತಿ ಎನ್ನಲು ಆಗುವುದಿಲ್ಲ. ಐಸಾಯ ದೀರ್ಘದರ್ಶಿಯ (ಪ್ರಾಫೆಟ್) ಗ್ರಂಥದ ಹಲವು ಭಾಗಗಳನ್ನು ಅವನ ಶಿಷ್ಯರು ಸೇರಿಸಿದುದು ಎಂದು ತಿಳಿದಿದೆ, ಇತ್ಯಾದಿ. ಇನ್ನು ಕೆಲವು ಗ್ರಂಥಗಳು, ಆಗಲೇ ರೂಪುಗೊಂಡು ಪ್ರಚಲಿತವಿದ್ದ ಹಲವು ಮೌಖಿಕ ಅಥವಾ ಲಿಖಿತ ಸಂಪ್ರದಾಯಗಳ ಜೋಡಣೆಯಾಗಿವೆ. ಹೀಗೆ ಕ್ರಿ.ಪೂ. 10ರಿಂದ 6ನೆಯ ಶತಮಾನದತನಕ ಬೇರೆ ಬೇರೆ ಅವಧಿಗಳಲ್ಲಿ ಬೇರೆ ಸ್ಥಳಗಳಲ್ಲಿ ರೂಪುಗೊಂಡ ನಾಲ್ಕು ಸಂಪ್ರದಾಯಗಳು ಹಲವು ಬಗೆಗಳಲ್ಲಿ ಮಿಳಿತಗೊಂಡು ಹಳೆಯ ಒಡಂಬಡಿಕೆಯ ಮೊದಲ ಐದು ಗ್ರಂಥಗಳು ಮೈದಳೆದುವು. ಹೊಸ ಒಡಂಬಡಿಕೆಯ ಗ್ರಂಥಗಳ ಲೇಖಕರು ಅಥವಾ ಸಂಪಾದಕರು ಯೇಸುವಿನ ಶಿಷ್ಯರು ಅಥವಾ ಕ್ರೈಸ್ತಧರ್ಮದ ಮೊದಲ ಅನುವರ್ತಿಗಳು. ಹಳೆಯ ಒಡಂಬಡಿಕೆಯ ಗ್ರಂಥಗಳ ಲೇಖಕರು ಅಥವಾ ಸಂಪಾದಕರು ಇಸ್ರೇಲ್ ಜನಾಂಗದ ಧಾರ್ಮಿಕ ನಾಯಕರು ಅಥವಾ ಶ್ರದ್ಧಾಳುಗಳು. ಕ್ರಿ.ಶ. ಮೊದಲನೆಯ ಶತಮಾನದೊಳಗೆ ಹೊಸ ಒಡಂಬಡಿಕೆಯ ಗ್ರಂಥಗಳು ಈಗಿರುವ ರೂಪಕ್ಕೆ ಬಂದಿದ್ದುವು. ಹಳೆಯ ಒಡಂಬಡಿಕೆಯ ಘಟನೆಗಳು (ಲೋಕಸೃಷ್ಟಿಯ ವಿಚಾರವನ್ನುಳಿದು) ಕ್ರಿ.ಪೂ.ಸು. 19ನೆಯ ಶತಮಾನದಿಂದ ಆರಂಭವಾಗುತ್ತವೆ. ಆದರೆ ಅವು ಲಿಖಿತರೂಪಕ್ಕೆ ಬಂದಿರುವುದು ಕ್ರಿ.ಪೂ. 10ನೆಯ ಶತಮಾನದಿಂದೀಚೆಗೆ.

ಹಳೆಯ ಒಡಂಬಡಿಕೆಯ ಗ್ರಂಥಗಳಲ್ಲಿ ಮೊದಲು ಲೋಕಸೃಷ್ಟಿಯ ಪ್ರಸ್ತಾಪವಿದೆ. ಅನಂತರದ ಗ್ರಂಥಗಳಲ್ಲಿ, ಇಸ್ರೇಲ್ ಜನತೆ ರೂಪುಗೊಂಡು, ಅವರನ್ನು ಪ್ರತ್ಯೇಕವಾಗಿ ತನ್ನ ಜನತೆ ಎಂದು ದೇವರು ಆಯ್ಕೆ ಮಾಡಿದುದು, ಅವರು ತನಗೆ ನಿಷ್ಠೆ ತೋರಿಸಬೇಕು, ಅದಕ್ಕೆ ತಾನು ನೀಡುವ ಪ್ರತಿಫಲ ಏನು ಇವನ್ನು ಕುರಿತ ವಿಚಾರವುಂಟು. ಅನೇಕ ವೇಳೆ ಇಸ್ರೇಲ್ ಜನ ದೇವರನ್ನು ಮರೆತು ಅನ್ಯ ದೈವಗಳ ಮೊರೆಹೊಕ್ಕಾಗ ಮತ್ತು ಅನಾಚಾರದಲ್ಲಿ ತೊಡಗಿದಾಗ ನ್ಯಾಯಧೀಶರು ಮತ್ತು ದೀರ್ಘದರ್ಶಿಗಳು ಅವರ ತಪ್ಪುಗಳನ್ನು ಖಂಡಿಸಿ ಅವರು ಸರಿದಾರಿಗೆ ಬರುವಂತೆ ಮಾಡಿದರು. ಇದಲ್ಲದೆ ಜ್ಞಾನಸಾಹಿತ್ಯವೆಂಬ (ವಿಸ್ಡಮ್ ಲಿಟರೇಚರ್) ವರ್ಗದ ಗ್ರಂಥಗಳು ಸಹ ಹಳೆಯ ಒಡಂಬಡಿಕೆಯಲ್ಲಿವೆ. ಪುರಾತನ ಪ್ರಾಚ್ಯದಲ್ಲಿ ಚಾಲ್ತಿಯಲ್ಲಿದ್ದ ಈ ಸಾಹಿತ್ಯ ಪ್ರಕಾರದ ವೈಶಿಷ್ಟ್ಯವನ್ನು ಬೈಬಲಿನ ಜ್ಞಾನಸಾಹಿತ್ಯ ಗ್ರಂಥಗಳಲ್ಲಿಯೂ ಕಾಣಬಹುದು. ಬದುಕಿನ ಜಂಜಾಟಗಳಿಗೆ ಮಾನವನ ಅನುಭವವೇ ಪರಿಹಾರ ಕೊಡುತ್ತದೆಯಲ್ಲದೆ ತತ್ತ್ವಧರ್ಮಗಳಲ್ಲಿ ಕೀರ್ತನೆಗಳು (ಸಾಲ್ಮ್ಸ್), ಪರಮಗೀತೆ (ಸಾಂಗ್ ಆಫ್ ಸಾಂಗ್ಸ್) ಎಂಬ ಸುಂದರ ಕಾವ್ಯವೂ ಹಳೆಯ ಒಡಂಬಡಿಕೆಯಲ್ಲಿ ಉಂಟು.

ಹೊಸ ಒಡಂಬಡಿಕೆಯ ನಾಲ್ಕು ಸುವಾರ್ತೆಗಳು ಯೇಸುವಿನ ಜೀವನ ಮತ್ತು ಬೋಧನೆಗಳನ್ನು ನಿರೂಪಿಸುತ್ತವೆ. ಇವುಗಳಲ್ಲಿ ಮೊದಲ ಮೂರು ಸುವಾರ್ತೆಗಳು ಪರಸ್ಪರ ಸಂಬಂಧ ವಿಶೇಷಗಳ ದೆಸೆಯಿಂದ ಅವು ಸಿನಾಪ್ಟಿಕ್ ಸುವಾರ್ತೆಗಳು ಎನಿಸಿವೆ. ಅಪೋಸ್ತಲರ ಕೃತಿಗಳಲ್ಲಿ ನವಜಾತ ಕ್ರೈಸ್ತ ಸಭೆಯ (ಕ್ರಿಶ್ಚಿಯನ್ ಚರ್ಚ್) ಚಿತ್ರಣವುಂಟು. 1 ಸೇಂಟ್ ಪೌಲ್ ಮತ್ತು ಇನ್ನು ಕೆಲವರು ಹೊಸತಾಗಿ ಸ್ಥಾಪಿತವಾದ ಕ್ರೈಸ್ತ ಸಮುದಾಯಗಳಿಗೆ ಒಂದು ನಿರ್ದಿಷ್ಟ ಸಮಸ್ಯೆಯನ್ನು ಕುರಿತೋ ಒಟ್ಟು ಬೋಧನಾತ್ಮಕವಾಗಿಯೋ ಬರೆದ ಪತ್ರಗಳೇ ಹೊಸ ಒಡಂಬಡಿಕೆಯ ಪತ್ರಗಳು. ವಿರೋಧಗಳನ್ನು ಎದುರಿಸುತ್ತಿದ್ದ ಕ್ರೈಸ್ತ ಸಭೆಯಲ್ಲಿ ಹುರುಪು ತುಂಬಲು ಬರೆದ ವಿಶಿಷ್ಟ ಸಾಹಿತ್ಯ ಪ್ರಕಾರದ ಗ್ರಂಥವೇ ಪ್ರಕಟಣೆ. ದೇವರ ಕಡೆಯವರು ಸದ್ಯದಲ್ಲಿ ಹಿಂಸೆಗೊಳಗಾದರೂ ಅಂತಿಮವಾಗಿ ವಿಜಯವನ್ನೂ ಮಹಿಮೆಯನ್ನೂ ಪಡೆಯುತ್ತಾರೆ ಎಂದು ಇದರಲ್ಲಿ ಹೇಳಿದೆ.

	ಇಸ್ರೇಲಿನ ವೃತ್ತಾಂತವೂ ಯೇಸುವಿನ ಹಾಗೂ ಕ್ರೈಸ್ತಸಭೆಯ ವೃತ್ತಾಂತವೂ ಚಾರಿತ್ರಿಕವೇ. ಆದರೆ ಅವು ನಾವು ತಿಳಿದಿರುವಂಥ ಚರಿತ್ರೆ ಅಂದರೆ ವಾಸ್ತವ ಘಟನೆಗಳ ಕಾಲಕ್ರಮಾನುಗತ ದಾಖಲೆ ಅಲ್ಲ. ಬೈಬಲಿನ ಲೇಖಕರು ತಮ್ಮ ಜನತೆಯ ಚರಿತ್ರೆಯೆಂದರೆ ದೇವರು ಮತ್ತು ತಮ್ಮ ನಡುವೆ ಸ್ಥಾಪಿಸಲ್ಪಟ್ಟ ಒಪ್ಪಂದದ ದೇವರ ಆಹ್ವಾನ ಮತ್ತು ಅದಕ್ಕೆ ತಮ್ಮ ಉತ್ತರ, ದೇವರ ವಾಗ್ದಾನ ಮತ್ತು ಯೇಸುಕ್ರಿಸ್ತನಲ್ಲಿ ಅದರ ನೆರವೇರುವಿಕೆ ಎಂದೇ ಅರ್ಥಮಾಡಿಕೊಂಡು, ಈ ದೃಷ್ಟಿಯಿಂದ ತಮ್ಮ ಜನತೆಯ ಮತ್ತು ಕ್ರೈಸ್ತಸಭೆಯ ವೃತ್ತಾಂತವನ್ನು ಪ್ರತಿಪಾದಿಸಿದರು. ಈ ಪ್ರತಿಪಾದನೆಯೇ ಅವರಿಗೆ ಮುಖ್ಯವಾಯಿತಲ್ಲದೆ ನಿರ್ದಿಷ್ಟ ದೇಶ ಕಾಲ ಘಟನೆಗಳ ಖಚಿತತೆಗಳಲ್ಲ. ಆದ್ದರಿಂದ ಇಂದಿನ ಚಾರಿತ್ರಿಕ ನಿಖರತೆಯನ್ನು ಈ ಧಾರ್ಮಿಕ ಸಂಪುಟದಲ್ಲಿ ಅರಸುವುದು ಸರಿಯಾಗದು, ಹಾಗೆಂದರೆ ಬೈಬಲ್ ವೃತ್ತಾಂತಗಳೆಲ್ಲ ಕಾಲ್ಪನಿಕವೆಂದಲ್ಲ. ಹಳೆಯ ಹಾಗೂ ಹೊಸ ಒಡಂಬಡಿಕೆಯ ವೃತ್ತಾಂತಗಳ ಚಾರಿತ್ರಿಕತೆಗೆ ಲೌಕಿಕ ಸಾಹಿತ್ಯದ ಬಾಹ್ಯ ಆಧಾರಗಳು ಖಂಡಿತ ಇವೆ. ಆದರೆ ಲೌಕಿಕ ಚರಿತ್ರೆಗೂ ಬೈಬಲಿನ ಧಾರ್ಮಿಕ ಚರಿತ್ರೆಗೂ ಕಂಡುಬರುವ ವಿರೋಧಾಭಾಸಗಳೇ. ಪುನರಾವರ್ತನೆಗಳು ಇತ್ಯಾದಿಗಳನ್ನು ಅರ್ಥವಿಸುವುದು ಮೇಲೆ ಹೇಳಿದ ದೃಷ್ಟಿಯಿಂದ ಅವನ್ನು ನೋಡಿದರೆ ಮಾತ್ರ ಸಾಧ್ಯವಾಗುತ್ತದೆ.

	ಬೈಬಲ್ ಅನುವಾದ: ಬೈಬಲ್ ಭಾಗಗಳು ಒಂದು ಸಾವಿರಕ್ಕೂ ಮೇಲ್ಪಟ್ಟ ಭಾಷೆಗಳಿಗೂ ಸಮಗ್ರ ಬೈಬಲ್ ಇನ್ನೂರಕ್ಕೂ ಹೆಚ್ಚಿನ ಭಾಷೆಗಳಿಗೂ ಅನುವಾದಗೊಂಡಿವೆ. ಇಂಗ್ಲಿಷಿನಲ್ಲಿ ಪ್ರಸಿದ್ಧವಾಗಿರುವ ಅನುವಾದಗಳ ಪೈಕಿ ಕಿಂಗ್ ಜೇಮ್ಸ್ ಆವೃತ್ತಿ (1611) ಮುಖ್ಯವಾದುದು. ಇದನ್ನು ಮೂಲವಾಗಿಟ್ಟು ಸಿದ್ಧಪಡಿಸಿದ ಪರಿಷ್ಕøತ ಅನುವಾದ ಸ್ಟ್ಯಾಂಡರ್ಡ್ ವರ್ಶನ್ (1952) ಹೆಚ್ಚು ಮನ್ನಣೆ ಪಡೆದಿದೆ. ಟುಡೇಸ್ ಇಂಗ್ಲಿಷ್ ವರ್ಶನ್ (ಸು. 1971) ಮೂಲಕ್ಕೆ ನಿಷ್ಠವಾಗಿದ್ದು ಜನಪ್ರಿಯವಾಗಿರುವ ಆವೃತ್ತಿ.

	ಬೈಬಲಿನ ಮೊತ್ತಮೊದಲ ಕನ್ನಡಾನುವಾದ 1809ರಲ್ಲಿ ಆಯಿತು. ಆ ವರ್ಷ ಬಂಗಾಳದ ಶ್ರೀರಾಮಪುರದಲ್ಲಿ ವಿಲಿಯಮ್ ಕೇರಿ ಸಿದ್ಧಪಡಿಸಿದ 4 ಸುವಾರ್ತೆಗಳ ಅನುವಾದ 1812ರ ಬೆಂಕಿ ಆಕಸ್ಮಿಕದಲ್ಲಿ ನಷ್ಟವಾಯಿತು. 1823ರಲ್ಲಿ ಅವೇ ಸುವಾರ್ತೆಗಳ ಅನುವಾದವನ್ನು ಸಿದ್ಧಪಡಿಸಿ ಕೇರಿ ಪ್ರಾರಂಭಿಸಿದ ಈ ಆವೃತ್ತಿ ಲಭ್ಯವಿದೆ.

	1810ರಲ್ಲಿ ಬಳ್ಳಾರಿಗೆ ಬಂದ ಜಾನ್‍ಹ್ಯಾಂಡ್ಸ್ ಎರಡು ವರ್ಷಗಳಲ್ಲಿ ಮೂರು ಸುವಾರ್ತೆಗಳ ಅನುವಾದ ಪ್ರಕಟಿಸಿದ. ಕಲ್ಕತ್ತೆಯ ಬೈಬಲ್ ಸೊಸೈಟಿಯ ಅನುದಾನದ ನೆರವಿನಿಂದ 1820ರಲ್ಲಿ ಸುವಾರ್ತೆಗಳ ಮತ್ತು ಆಪೋಸ್ತಲರ ಕೃತ್ಯಗಳ ಅನುವಾದ ಹ್ಯಾಂಡ್ಸ್‍ನಿಂದ ಮುದ್ರಿಸಲ್ಪಟ್ಟಿತು. 1830ರ ಒಳಗೆ ಸಮಗ್ರ ಹೊಸ ಒಡಂಬಡಿಕೆಯ ಅನುವಾದ ಮತ್ತು ಅದರ ಪರಿಷ್ಕರಣ ಮುಗಿದು ಬಳ್ಳಾರಿಯ ಮಿಷನ್ ಮುದ್ರಣಾಲಯದಲ್ಲಿ ಅಚ್ಚಾಯಿತು. 1816ರಿಂದೀಚೆಗೆ ಸಹಕಾರ್ಯಕರ್ತನೊಬ್ಬನ ಸಹಾಯದಿಂದ ಹಳೆಯ ಒಡಂಬಡಿಕೆಯ ಕೆಲವು ಗ್ರಂಥಗಳನ್ನು ಹ್ಯಾಂಡ್ಸ್ ಅನುವಾದಿಸತೊಡಗಿದ. 1831ರಲ್ಲಿ ಇಡೀ ಹಳೆಯ ಒಡಂಬಡಿಕೆಯ ಅನುವಾದ ಪೂರ್ತಿಗೊಂಡು ಅಚ್ಚಾಯಿತು. ಜೆ. ಡಢಮ್ಲರ್ ಎ.ಡಿ. ಕ್ಯಾಂಪ್ ಬೆಲ್ ಮತ್ತು ಆರ್. ಸಿ. ಗೋಸ್‍ಲಿಂಗ್ ಅವರು ಸಹ ಈ ಅನುವಾದ ಕಾರ್ಯದಲ್ಲಿ ಸಹಾಯ ಮಾಡಿದರು.

	ಹೊಸ ಒಡಂಬಡಿಕೆಯ ಒಂದು ಅನುವಾದವನ್ನು ಬಾಸೆಲ್ ಮಿಶನಿನ ವೈಗಲ್ ಮತ್ತು ಮೋಗ್ಲಿಂಗ್ ಸಿದ್ಧಪಡಿಸಿದ್ದರು. 1831ರ ಬಳ್ಳಾರಿ ಆವೃತ್ತಿಯನ್ನು ಪರಿಷ್ಕರಿಸಲು ಮದರಾಸು ಬೈನಲ್ ಸೊಸೈಟಿ ವೈಗಲ್‍ನನ್ನೇ ನೇಮಿಸಿತು. ಪರಿಷ್ಕøತ ಹೊಸ ಒಡಂಬಡಿಕೆಯ ಆವೃತ್ತಿ 1850ರಲ್ಲಿ ಪುನಃ ಪರಿಷ್ಕøತವಾಗಿ 1854ರಲ್ಲಿ ಪ್ರಕಟವಾಯಿತು, ಇದರಲ್ಲಿ ಕೆಲವು ಗ್ರಂಥಗಳ ಪಾಠ ಹೊಸತಾದ ಅನುವಾದವೇ ಆಗಿತ್ತು. 1854ರಲ್ಲಿ ವೈಗಲ್ ಕಾಲವಾದಾಗ ಹಳೆಯ ಒಡಂಬಡಿಕೆಯ ಬಹುಭಾಗದ ಅನುವಾದವನ್ನು ಅವನು ಬಿಟ್ಟುಹೋಗಿದ್ದ (ಪರಿಷ್ಕರಣವೆಂದು ಹೇಳಿದರೂ ಅನೇಕ ವೇಳೆ ಹೊಸತಾಗಿ ಅನುವಾದವೇ ಪರಿಷ್ಕರಣದ ಹೆಸರಿನಲ್ಲಿ ನಡೆಯುತ್ತಿತ್ತು). ಇದನ್ನು ಒಂದು ಸಮಿತಿ ಪರಿಷ್ಕರಿಸಿತು. ಹೆಚ್ಚಿನ ಕೆಲಸವನ್ನು ಕಾಲಿಸ್ ಕ್ಯಾಂಪ್‍ಬೆಲ್ ಮತ್ತು ಬೆಂಜಮಿನ್ ರೈಸ್ ಮಾಡಿದರು. ಇದರ ಫಲವಾಗಿ ಹಳೆಯ ಒಡಂಬಡಿಕೆಯ ತಾತ್ಕಾಲಿಕ ಆವೃತ್ತಿ 1860ರಲ್ಲಿ ಪ್ರಕಟವಾಯಿತು. 1858ರಲ್ಲಿ ಇಡೀ ಬೈಬಲಿನ ಆವೃತ್ತಿ ಪ್ರಕಟವಾಯಿತು.

	ಅಲ್ಲಿಂದೀಚೆಗೆ 1865ರ ಆವೃತ್ತಿಯನ್ನು ಪರಿಷ್ಕರಿಸುವ ಸಮಿತಿಗೆ ಮುಖ್ಯಸ್ಥನಾಗಿ 1899ರಲ್ಲಿ ಹೆನ್ರಿ ಹೇಗ್ ನೇಮಕಗೊಂಡಮೇಲೆ 1906ರಲ್ಲಿ ಹೊಸ ಒಡಂಬಡಿಕೆಯ ಪರಿಷ್ಕøತ ಆವೃತ್ತಿ ಪ್ರಕಟವಾಯಿತು. 1934ರಲ್ಲಿ ಇಡೀ ಬೈಬಲ್ ಪರಿಷ್ಕøತವಾಗಿ ಪ್ರಕಟವಾಯಿತು. ಈ ಪರಿಷ್ಕರಣದಲ್ಲಿ ಇ.ಪಿ.ರೈಸ್, ಡಬ್ಲ್ಯು. ಎಚ್. ತಾರ್ಪ್ ಮತ್ತು ಎಚ್.ರಿಶ್ ಮುಖ್ಯಪಾತ್ರ ವಹಿಸಿದರು. ಇವೆಲ್ಲ ಅನುವಾದವನ್ನು ಮಾಡಿದವರು ಪ್ರಾಟೆಸ್ಟಂಟರೇ. ಆದರೆ 1982ರಲ್ಲಿ ಪ್ರಕಟವಾದ ಹೊಸ ಒಡಂಬಡಿಕೆಯ ನೂತನ ಅನುವಾದ ಪ್ರಾಟೆಸ್ಟಂಟ್ ಮತ್ತು ಕೆಥೋಲಿಕರ ಜಂಟಿ ಪ್ರಯತ್ನದ ಫಲ.

	ಬೈಬಲಿನ ಸಂದೇಶ: ದೇವರು ಪ್ರೀತಿಯೇ ಆಗಿರುತ್ತಾನೆ. (1 ಜಾನ್ 4, 8) ಇದೇ ಬೈಬಲಿನ ಮುಖ್ಯ ಆಶಯ. ಈ ಪ್ರೀತಿ ಶ್ರೀಮಂತ, ಸಮೃದ್ಧ ಶಾಶ್ವತ ಹಾಗೂ ಭಾವಾದ್ರ್ರವಾದುದು. ಚಾರಿತ್ರಿಕ ವ್ಯಕ್ತಿಯಾದ ಯೇಸು ಕ್ರಿಸ್ತನಲ್ಲಿ ಇದು ಪರಿಪೂರ್ಣವಾದ ಮೂರ್ತ ಸ್ವರೂಪದಲ್ಲಿ ಕಾಣಿಸಿಕೊಂಡಿತು. ಜಗತ್ತಿನ ಆದಿಯಿಂದಲೂ ಇದ್ದು ಅಂತಿಮವಾಗಿ ಯೇಸುಕ್ರಿಸ್ತನಲ್ಲಿ ಪ್ರಕಟವಾದ ದೇವರ ಪ್ರೀತಿಯನ್ನು ಒಪ್ಪುವಂತೆ ಮತ್ತು ಅದಕ್ಕೆ ಮಾರ್ಕೊಡುವಂತೆ ಬೈಬಲ್ ಓದುಗನನ್ನು ಆಹ್ವಾನಿಸುತ್ತದೆ.

	ಮಾನವನ ಮೇಲೆ ದೇವರು ಇಟ್ಟಿರುವ ಪ್ರೀತಿಯನ್ನು ದೀರ್ಘದರ್ಶಿಗಳ ಈ ವಚನಗಳು ವರ್ಣಿಸುತ್ತವೆ. 'ಭಯಪಡಬೇಡ, ನಾನೇ ನಿನ್ನನ್ನು ವಿಮೋಚನೆಗೊಳಿಸಿದವನು, ಹೆಸರೆತ್ತಿ ನಿನ್ನನ್ನು ಕರೆದವನು ನಾನೆ, ನೀನು ನನ್ನವನೇ, ನನ್ನ ದೃಷ್ಟಿಯಲ್ಲಿ ನೀನು ಅಮೂಲ್ಯನೂ ಮಾನ್ಯನೂ ಆಗಿರುವಿ; ನೀನೆಂದರೆ ನನಗೆ ಪ್ರೀತಿ.' (ಐಸಾಯ 43, 1 ಮತ್ತು 41). ಈ ಪ್ರೀತಿಯ ದೆಸೆಯಿಂದ ಮಾನವನ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ದುಂದುಗಾರ ಮಗನ ಪ್ರಖ್ಯಾತ ಸಾಮತಿಯ ಮೂಲಕ ಈ ಕ್ಷಮಾಗುಣವನ್ನು ಬೋಧಿಸಿದ. ಆಸ್ತಿಯಲ್ಲಿ ತನಗೆ ಬರಬೇಕಾದ ಪಾಲನ್ನು ಹಟಮಾಡಿ ಪಡೆದು, ಅದನ್ನು ಪೋಲು ಮಾಡಿ, ನಿರ್ಗತಿಕನಾಗಿ ಕೊನೆಗೆ ಬಂದ ಮಗನನ್ನು ಕ್ಷಮಿಸಿದುದು ಮಾತ್ರವಲ್ಲ, ಅವನು ಮರಳಿ ಬಂದಿರುವನೆಂದು ಭಾರಿ ಔತಣವನ್ನು ಏರ್ಪಡಿಸುವ ತಂದೆಯ ಕಥೆಯಿದು (ಲೂಕ್ 15, 11-32). 'ಪಶ್ಚಾತ್ತಾಪದ ಅಗತ್ಯವಿಲ್ಲದ ತೊಂಬತ್ತೊಂಬತ್ತು ನೀತಿವಂತರಿಗಿಂತ ಪಶ್ಚಾತ್ತಾಪ ಪಡುವ ಒಬ್ಬ ಪಾಪಿಷ್ಠನನ್ನು ಕಂಡು ಸ್ವರ್ಗದಲ್ಲಿ ಹೆಚ್ಚು ಸಂಭ್ರಮವಿರುತ್ತದೆ (ಲೂಕ್ 15, 7) ಎಂದು ಯೇಸು ಹೇಳಿದ, ಈ ಪ್ರೀತಿಯಿಂದ ಆತ ಮನುಷ್ಯರ ಅಗತ್ಯಗಳನ್ನು ಪೂರೈಸುತ್ತಾನೆ, ಅತ್ಯಂತ ಆತ್ಮೀಯತೆ, ಕಳಕಳಿ, ಮಮತೆಗಳಿಂದ ಅವರನ್ನು ನಡೆಸಿಕೊಳ್ಳುತ್ತಾನೆ. ಎಲ್ಲಕ್ಕಿಂತಲೂ ಹೆಚ್ಚಾಗಿ ತನ್ನನ್ನೇ ಮಾನವ ಹಿತಕ್ಕೋಸ್ಕರ ಶಿಲುಬೆಗೆ ಬಲಿಯಾಗಿ ಅರ್ಪಿಸಿಕೊಳ್ಳುತ್ತಾನೆ. 'ತನ್ನ ಸ್ನೇಹಿತರಿಗೋಸ್ಕರ ತನ್ನ ಪ್ರಾಣವನ್ನೇ ನೀಗುವುದಕ್ಕಿಂತ ಹೆಚ್ಚಿನ ಪ್ರೀತಿ ಯಾರಿಗೂ ಇಲ್ಲ ಎಂದು ಶಿಲುಬೆಯಲ್ಲಿ ತಾನು ಸಾಯುವುದನ್ನು ಕುರಿತು ಯೇಸು ಹೇಳಿದ್ದ. ಈ ಪ್ರೀತಿಯನ್ನು ಯೋಗ್ಯರೀತಿಯಲ್ಲಿ ಮತ್ತು ಪ್ರಮಾಣದಲ್ಲಿ ಮಾರ್ಕೊಡಬೇಕೆಂದು ಬೈಬಲ್ ಓದುಗನನ್ನು ಒತ್ತಾಯಿಸುತ್ತದೆ.

	ಅತಿಭಾವುಕತೆ, ಸ್ವಾಂತಸುಖ, ಮಧುರ ಅನುಭವಗಳು ಪ್ರಪಂಚದ ಕಾರ್ಪಣ್ಯಗಳಿಂದ ರಕ್ಷಣೆ-ಇವು ಪ್ರೀತಿಯ ಕಲ್ಪನೆಯ ಜೊತೆಯಲ್ಲಿ ಕಾಣಿಸಿಕೊಳ್ಳುವುದುಂಟು. ಆದರೆ ಬೈಬಲಿನಲ್ಲಿ ಹೇಳುವಂಥ ಪ್ರೀತಿ ಇಂಥ ಕ್ಷಣಿಕ ರಂಜಕತೆ ಲೋಲುಪತೆಗಳಿಗಿಂತಲೂ ಮನುಷ್ಯನ ಭಾವಗಳಲ್ಲಿ ಅತ್ಯಂತ ಆಳವಾದ ಸಾತ್ತ್ವಿಕ ಹಾಗೂ ಉದಾತ್ತ ಭಾವವಾಗಿದೆ ಎನ್ನುವುದು ಯುಕ್ತ. ಹಳೆಯ ಒಡಂಬಡಿಕೆಯಲ್ಲಿ ತನಗೆ ನಿಷ್ಠೆಯನ್ನು ತೋರಿಸುವುದೆಂದರೆ ತಾನು ವಿಧಿಸಿದ ಈ ಹತ್ತು ಆಜ್ಞೆಗಳನ್ನು ಪಾಲಿಸುವುದು ಎಂದು ದೇವರು ಹೇಳಿದ್ದ. ಏಕೈಕ ನಿಜ ದೇವರನ್ನು ಆರಾಧಿಸಬೇಕು, ಅವನ ಹೆಸರನ್ನು ವ್ಯರ್ಥವಾಗಿ ಬಳಸಬಾರದು, ಅವನಿಗೆ ಪೂಜ್ಯವಾಗಿದ್ದ ದಿನವನ್ನು ಯೋಗ್ಯವಾಗಿ ಆಚರಿಸಬೇಕು; ತಂದೆತಾಯಿಗಳನ್ನು ಗೌರವಿಸಬೇಕು, ಕೊಲಬೇಡ, ವ್ಯಭಿಚಾರ ಮಾಡಬೇಡ, ಕಳಬೇಡ, ಸುಳ್ಳು ಸಾಕ್ಷಿ ಹೇಳಬೇಡ, ಪರರ ಸ್ವತ್ತನ್ನು ಬಯಸಬೇಡ, ಪರರ ಪತ್ನಿಯನ್ನು ಬಯಸಬೇಡ (ಎಕ್ಸಡನ್ 20, 1-17). ಇವೆಲ್ಲ ಎರಡು ಮುಖ್ಯ ಆಜ್ಞೆಗಳಲ್ಲಿ ಅಡಕವಾಗುತ್ತವೆ. ದೇವರನ್ನು ಪ್ರೀತಿಸಬೇಕು ಮತ್ತು ತನ್ನಂತೆ ಪರರನ್ನು ಪ್ರೀತಿಸಬೇಕು (ರೋಮನ್ಸ್ 13-9).

	ಹಳೆಯ ಒಡಂಬಡಿಕೆಯಲ್ಲಿ ಹೇಳಿರುವುದನ್ನೇ ಪೂರ್ಣಗೊಳಿಸಲು ಬಂದವನು ತಾನು ಎಂದು ಹೇಳಿಕೊಂಡಿದ್ದ ಯೇಸುಕ್ರಿಸ್ತ, ತನ್ನನ್ನು ಪ್ರೀತಿಸುವುದೆಂದರೆ ತಾನು ವಿಧಿಸಿದ ಆಜ್ಞೆಗಳನ್ನು ಪಾಲಿಸುವುದು ಎಂದು ಸ್ಪಷ್ಟವಾಗಿ ಹೇಳಿದ್ದ. ನೀವು ನನ್ನನ್ನು ಪ್ರೀತಿಸುವುದಾದರೆ ನಾನು ವಿಧಿಸಿದ ಆಜ್ಞೆಗಳನ್ನು ಪಾಲಿಸುವಿರಿ (ಜಾನ್ 14-15) ಎಂದಲ್ಲಿ ಹಳೆಯ ಒಡಂಬಡಿಕೆಯ ಹತ್ತು ಆಜ್ಞೆಗಳೂ ಸೇರಿದ್ದವು ಎನ್ನುವುದರಲ್ಲಿ ಸಂದೇಹವಿಲ್ಲ. ಅವಲ್ಲದೆ ಹೊಸದಾದ ಒಂದು ಆಜ್ಞೆಯನ್ನು ಯೇಸು ವಿಧಿಸಿದ್ದ. ಹೊಸದೊಂದು ಆಜ್ಞೆಯನ್ನು ನಾನು ನಿಮಗೆ ಕೊಡುತ್ತೇನೆ, ಒಬ್ಬರನ್ನೊಬ್ಬರು ಪ್ರೀತಿಸಿ; ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ (ಜಾನ್ 13-34). ಹಳೆಯ ಒಡಂಬಡಿಕೆಯ ಹತ್ತು ಆಜ್ಞೆಗಳಿಗಿಂತ ಹೆಚ್ಚಿನದನ್ನು ಪ್ರೀತಿಗೆ ಸಂಬಂಧಿಸಿದ ಈ ಆಜ್ಞೆ ಅಪೇಕ್ಷಿಸುತ್ತದೆ ಮತ್ತು ಅವನ್ನು ಪರಿಪೂರ್ಣಗೊಳಿಸುತ್ತದೆ.

	ಸೇಂಟ್ ಪೌಲ್ ಪ್ರೀತಿಯನ್ನು ಹೀಗೆ ವರ್ಣಿಸಿದ್ದಾನೆ; ಪ್ರೀತಿ ಬಲು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವುದು. ಪ್ರೀತಿ ಹೊಟ್ಟೆಕಿಚ್ಚು ಪಡುವುದಿಲ್ಲ. ಹೊಗಳಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ, ಮರ್ಯಾದೆಗೆಟ್ಟು ನಡೆಯುವುದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಸಿಟ್ಟುಗೊಳ್ಳುವುದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅನ್ಯಾಯವನ್ನು ನೋಡಿ ಸಂತೋಷಿಸದೆ ಸತ್ಯಕ್ಕೆ ಜಯವಾಗುವಲ್ಲಿ ಸಂತೋಷಿಸುತ್ತದೆ; ಎಲ್ಲವನ್ನು ಅಡಗಿಸಿಕೊಳ್ಳುತ್ತದೆ. ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ (1 ಕೊರಿಂದ್ 13, 4-7). ಈ ಪ್ರೀತಿಯನ್ನು ಅನುಷ್ಠಾನಕ್ಕೆ ತರುವುದರಿಂದ ಮಾನವನ ಆಂತರ್ಯ ಎಲ್ಲ ಬಂಧನಗಳಿಂದ ಮುಕ್ತಗೊಳ್ಳುತ್ತದೆ, ಅವನು ಪವಿತ್ರಾತ್ಮನಲ್ಲಿ ನೆಲೆಗೊಳ್ಳುತ್ತಾನೆ, ದೈಹಿಕ ವ್ಯಾಮೋಹ ಕೆಟ್ಟ ಪರಿಣಾಮಗಳನ್ನು ವರ್ಜಿಸುತ್ತಾನೆ. ಪ್ರೀತಿ, ಆನಂದ, ನೆಮ್ಮದಿ, ಸಹನೆ ದಯೆ, ಒಳ್ಳೆಯತನ, ನಿಷ್ಠೆ, ಸೌಜನ್ಯ, ಸಂವಾದಿ ಸದ್ಗುಣ ಸಂಪನ್ನನಾಗುತ್ತಾನೆ (ಗಬೀಷಿ 5, 22). ಈ ಬಗೆಯ ಆತ್ಮಶುದ್ಧಿ ಭಕ್ತನನ್ನು ಆಧ್ಯಾತ್ಮಿಕ ಪರಿಪೂರ್ಣತೆಯತ್ತ ನಡೆಸುತ್ತದೆ. ಲೌಕಿಕದಲ್ಲಿ ನೀತಿವಂತನಾಗಿದ್ದು ಪರಾತತ್ತ್ವದ ಅತಿ ಸನಿಹದಲ್ಲಿಯೇ ಅವನು ಬಾಳುತ್ತಾನೆ. ಪ್ರೀತಿಯೇ ಇದಕ್ಕೆಲ್ಲ ಮೂಲ. 'ನನ್ನ ಪ್ರೀತಿಯಲ್ಲಿ ನೆಲೆಗೊಂಡು ಇರಿ' ಎಂದು ಯೇಸುಕ್ರಿಸ್ತ ಆಹ್ವಾನಿಸಿದುದೇ ಬೈಬಲಿನ ಸಂದೇಶ.
   (ಇ.ಎನ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ